ಕವನಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಮಾರ್ಚ್ 23, 2012

ಜಾಡ್ಯ

ಉಸುಬು ತುಂಬಿದ ದಾರಿ
ಕುಸಿಯುತ್ತಿದ್ದರೂ
ಅಲ್ಲೇ ನಡೆವ ತವಕ
ಮುಳುಗುತ್ತಿದ್ದರೂ
ಅಲ್ಲೇ ಸಾಗುವ ಸೆಳೆತ
ಬಳಲಿ ಬೆಂಡಾದರೂ
ಮತ್ತಲ್ಲೇ ಬೆಂಬತ್ತುವ ಬಯಕೆ

ಉತ್ಸಾಹವಿರದಿದ್ದರೂ
ಬಡಕಲಾಗೆ ಮುಂದೊಡಿಸುವ ಚಿತ್ತ
ಹೊಸದೇನು ಕಾಣದಾದರೂ
ಹಳೆ ಗಾಣವನ್ನೇ ಸುತ್ತುವ ಮನ
ಸ್ವಂತಿಕೆಯ ಹುಡುಕಲಾರದೆ
ಅಪ್ಪ ನೆಟ್ಟುದ್ದಕ್ಕೇ ಜೋತು ಬೀಳುವ ದೇಹ
ಹಗಲಾದರೆ ಕೆಲಸ, ಕತ್ತಲಾದರೆ ನಿದ್ದೆ
ದೂಡುತ್ತಲೇ ಕಳೆವ ದಿನ

ಎಂದು ಬರಲಿದೆ ಇಲ್ಲಿ ಸೂರ್ಯನುದಯ ?
ಉಸುಬೇ ಇರದ ನಾಡೊಂದರ ಉದಯ ?

- ಈಶ್ವರ ಪ್ರಸಾದ.

ಸೋಮವಾರ, ಫೆಬ್ರವರಿ 13, 2012

ಸಂಗಾತಿ

ನಾ 
ನಡೆವ ದಾರಿಯಲ್ಲಿ 
ಮುಳ್ಳುಗಳಿವೆ 
ಏರು - ತಗ್ಗುಗಳಿವೆ 
ಕಾರ್ಗತ್ತಲಿದೆ 
ಎಂದು ಗೊತ್ತಿದ್ದರೂ 
ನೀ
ನನಗೆ ಜೊತೆಯಾದೆ...

ನಿನ್ನ 
ಮುಗಿಲಾಚೆಗಿನ 
ಕನಸನ್ನು 
ನಾ
ತರಲಾರೆ 
ಎಂದು ಗೊತ್ತಿದ್ದರೂ 
ನನ್ನೊಡನೆ
ಹಸಮಣೆಯೇರಿದೆ...

ನೀ 
ಆಡುವಾಗ ಕಳಕೊಂಡ 
ಕಪ್ಪೆ ಚಿಪ್ಪುಗಳ 
ನಾ
ತರಲಾರೆ 
ಎಂದು ಗೊತ್ತಿದ್ದರೂ
ನನ್ನೊಡನೆ
ಬಾಳ ನೌಕೆಯೇರಿದೆ...

ನೀ
ಬಯಸಿದ
ಸುಂದರ ಸಂಜೆಗಳ
ನಾ
ಕೊಡಲಾರೆನೆಂದು
ಗೊತ್ತಿದ್ದರೂ
ಶಬರಿಯಂತೆ ಕಾದೆ...

ನೀ
ಕಲ್ಪಿಸಿದ
ಪುಷ್ಪ ಫಥದಲ್ಲಿ
ನಾ
ಚಲಿಸಲಾರೆನೆಂದು
ಗೊತ್ತಿದ್ದರೂ
ಸೀತೆಯಂತೆ ಹಿಂಬಾಲಿಸಿದೆ...

ನಿನ್ನ
ತ್ಯಾಗಕ್ಕೆ ಬದಲಾಗಿ
ನಾನೇನು ಕೊಡಬಲ್ಲೆ ?
ಎಂದೂ ಮರೆಯದ ಸವಿ ಮುತ್ತು
ತುಂಬು ಹೃದಯದ ಪ್ರೀತಿ
ಮತ್ತು
ನಿನ್ನಾ ಕಣ್ಣೀರು ನೆಲ ಮುಟ್ಟದಂತೆ
ತಡೆಯುವುದರ ಹೊರತು...

- ಈಶ್ವರ ಪ್ರಸಾದ.

ಶುಕ್ರವಾರ, ಫೆಬ್ರವರಿ 10, 2012

(ವಿ) ಚಿತ್ರ

ರೈತರ ಕಂಗಳಲ್ಲಿ
ಬದುಕಿನ ಕರಾಳ ಚಿತ್ರ
ಮಂತ್ರಿಗಳ ಕಂಗಳಲ್ಲಿ
ಮದನ ಲೀಲೆಯ ನೀಲ ಚಿತ್ರ !

- ಈಶ್ವರ ಪ್ರಸಾದ.

ಬೆಳವಣಿಗೆ

ಮೊದಲು ಬಂತು ಸಣ್ಣ ಟಾಕೀಸಲ್ಲಿ ಮೂಕ ಚಿತ್ರ 
ಮತ್ತೆ ಬಂತು ಟೆಂಟಲ್ಲಿ ಕಪ್ಪು-ಬಿಳುಪು ಚಿತ್ರ 
ಮುಂದೆ ಬಂತು ಥಿಯೇಟರಲ್ಲಿ  ಬಣ್ಣದ ಚಿತ್ರ 
ಇದೀಗ ಬಂದಿದೆ ಪಾರ್ಲಿಮೆಂಟಲ್ಲಿ ನೀಲ ಚಿತ್ರ !!!

- ಈಶ್ವರ ಪ್ರಸಾದ 

ಮಂಗಳವಾರ, ಫೆಬ್ರವರಿ 7, 2012

ನಾವು ಕಳಕೊಂಡಿದ್ದು ...



ಹೊರಗೆ ಮಳೆ ಭೋರ್ಗರೆಯುತಿರಲು 
ಬೆಚ್ಚನೆಯ ಹಚ್ಚಡದೊಳು ಸೇರಿಕೊಳ್ಳುವ ಸುಖ 
ಕಣ್ಣು ಕೋರೈಸುವ ಕೋಲ್ಮಿಂಚುಗಳು ನಲಿಯುತಿರಲು 
ಕತ್ತಲಲಿ ಒಂಟಿಯಾಗಿ ಬಾನ ನೋಡುವ ಸುಖ 
ಹುಣ್ಣಿಮೆಯ ಚಂದಿರನು ಬಾನಂಗಳವ ಬೆಳಗುತಿರಲು 
ಸಾಗರ ತಟದಿ ಮೌನದಲಿ ಅಡ್ಡಾಡುವ ಸುಖ 
ಹಚ್ಚ ಹಸಿರಿನ ಮಧ್ಯೆ ಹಕ್ಕಿಗಳು ಕಲರವಿಸುತಿರಲು
ದೂರದ ಕಪ್ಪು ಬಂಡೆಯೊಂದರಲಿ ಕೂರುವ ಸುಖ 
ಇಬ್ಬನಿಯ ಹನಿಗಳು ಹೂಗಿಡದಿ ಚಿತ್ತಾರ ಬಿಡಿಸಲು 
ಮುಂಜಾವದಲೆದ್ದು ಅಲೆಯುವ ಸುಖ 
ಸಂಜೆಗತ್ತಲಲಿ ತಂಗಾಳಿ ಬೀಸುತಿರಲು 
ಬೆಟ್ಟದಾ ತುದಿಯಲಿ ಸುಮ್ಮನೇ ನಿಲ್ಲುವ ಸುಖ 
ಕಪ್ಪು ಕತ್ತಲು ಸುತ್ತ ಮುಸುಕುತಿರಲು 
ಸಣ್ಣಗೆ ಅಲ್ಲಾಡುವ ಒಂಟಿಮರವೊಂದರ ದಿಟ್ಟಿಸುವ ಸುಖ 
ನೀಲ ಆಗಸದಿ ಹಕ್ಕಿಗಳು ಹಿಂಡಾಗಿ ಹಾರುತಿರಲು 
ಮನವ ಗರಿಗೆದರಿಸಿ ಹಾರಿಸುವ ಸುಖ 
ವಸಂತ ಕಾಲದಿ ಎಲೆಎಲೆಗಳೂ ಚಿಗುರುತಿರಲು 
ಮರು ಹುಟ್ಟು ಇದೆಂದು ಭಾವುಕತೆ ಸೂಸುವ ಸುಖ 
ಪೂರ್ವದಲಿ ಕೆಂಪು ಸೂರ್ಯನುದಯಿಸುತಿರಲು 
ಹೊಸ ದಿನವೊಂದರ ಆರಂಭವೆಂದು ಖುಷಿಪಡುವ ಸುಖ 

- ಈಶ್ವರ ಪ್ರಸಾದ.   

ಶನಿವಾರ, ಫೆಬ್ರವರಿ 4, 2012

ಕನಸು

ಕನಸು ಕಟ್ಟುವ ಹೊತ್ತು 
ಮನವು ನಿರ್ಭಯದಿ ಹರಿವ ಹೊತ್ತು 
ತಡೆಯಿಲ್ಲದ ಯೋಚನೆಗಳು ಬರುವ ಹೊತ್ತು 
ಯಾವತ್ತು ಸುತ್ತಿರುತ್ತದೆ ಬರೀ ಕತ್ತಲು 
ಅದಕ್ಕೆ ಕನಸು ಕನಸಾಗಿರುತ್ತದೆ.

- ಈಶ್ವರ ಪ್ರಸಾದ 

ನನ್ನ ನಲ್ಲೆಗೆ...

ಕರಿ ಮೋಡದ ಮರೆ ಯಲ್ಲಿ
ಬಂದ ಬಿಳಿ ಹನಿಯು ನೀನೇನಾ
ಕರಿ ಗತ್ತಲ ಹಿಂದಿಕ್ಕಿದ
ಬೆಳ್ಳಿ ಚಂದಿರ ನೀನೇನಾ
ಬರಡಾದ ಭೂಮಿಯಲ್ಲಿ
ಹಸಿರು ತಂದವಳು ನೀನೇನಾ
ಬತ್ತಿದ ನದಿಯಲ್ಲಿ
ಜರಿ ಹರಿಸಿದವಳು ನೀನೇನಾ
ಹೊತ್ತುವ ಬಿಸಿಲಲ್ಲಿ
ತಂಗಾಳಿ ಬೀಸಿದವಳು ನೀನೇನಾ
ಚುಚ್ಚುವ ದ್ವೇಷ ದಲಿ
ಪ್ರೀತಿಯೊರತೆ ಕೊಟ್ಟವಳು ನೀನೇನಾ
ಬಣ್ಣ ಸತ್ತ ಕಣ್ಣುಗಳಲಿ
ಕಾಮನ ಬಿಲ್ಲ ಬರೆದವಳು ನೀನೇನಾ
ನೋವಿನ ಬುಡದಿಂದ
ನಲಿವ ಚಿಮ್ಮಿಸಿದವಳು ನೀನೇನಾ
ಗುರಿಯಿರದ ಬಾಳಿಗೆ
ನೆಲೆ ಕಾಣಿಸಿದವಳು ನೀನೇನಾ
ನನ್ನ ಹೃದಯ ಕದ್ದು
ಗೆದ್ದವಳು ಎಂದೆಂದೂ ನೀನೇನಾ

- ಈಶ್ವರ ಪ್ರಸಾದ