ಮಂಗಳವಾರ, ಫೆಬ್ರವರಿ 7, 2012

ನಾವು ಕಳಕೊಂಡಿದ್ದು ...ಹೊರಗೆ ಮಳೆ ಭೋರ್ಗರೆಯುತಿರಲು 
ಬೆಚ್ಚನೆಯ ಹಚ್ಚಡದೊಳು ಸೇರಿಕೊಳ್ಳುವ ಸುಖ 
ಕಣ್ಣು ಕೋರೈಸುವ ಕೋಲ್ಮಿಂಚುಗಳು ನಲಿಯುತಿರಲು 
ಕತ್ತಲಲಿ ಒಂಟಿಯಾಗಿ ಬಾನ ನೋಡುವ ಸುಖ 
ಹುಣ್ಣಿಮೆಯ ಚಂದಿರನು ಬಾನಂಗಳವ ಬೆಳಗುತಿರಲು 
ಸಾಗರ ತಟದಿ ಮೌನದಲಿ ಅಡ್ಡಾಡುವ ಸುಖ 
ಹಚ್ಚ ಹಸಿರಿನ ಮಧ್ಯೆ ಹಕ್ಕಿಗಳು ಕಲರವಿಸುತಿರಲು
ದೂರದ ಕಪ್ಪು ಬಂಡೆಯೊಂದರಲಿ ಕೂರುವ ಸುಖ 
ಇಬ್ಬನಿಯ ಹನಿಗಳು ಹೂಗಿಡದಿ ಚಿತ್ತಾರ ಬಿಡಿಸಲು 
ಮುಂಜಾವದಲೆದ್ದು ಅಲೆಯುವ ಸುಖ 
ಸಂಜೆಗತ್ತಲಲಿ ತಂಗಾಳಿ ಬೀಸುತಿರಲು 
ಬೆಟ್ಟದಾ ತುದಿಯಲಿ ಸುಮ್ಮನೇ ನಿಲ್ಲುವ ಸುಖ 
ಕಪ್ಪು ಕತ್ತಲು ಸುತ್ತ ಮುಸುಕುತಿರಲು 
ಸಣ್ಣಗೆ ಅಲ್ಲಾಡುವ ಒಂಟಿಮರವೊಂದರ ದಿಟ್ಟಿಸುವ ಸುಖ 
ನೀಲ ಆಗಸದಿ ಹಕ್ಕಿಗಳು ಹಿಂಡಾಗಿ ಹಾರುತಿರಲು 
ಮನವ ಗರಿಗೆದರಿಸಿ ಹಾರಿಸುವ ಸುಖ 
ವಸಂತ ಕಾಲದಿ ಎಲೆಎಲೆಗಳೂ ಚಿಗುರುತಿರಲು 
ಮರು ಹುಟ್ಟು ಇದೆಂದು ಭಾವುಕತೆ ಸೂಸುವ ಸುಖ 
ಪೂರ್ವದಲಿ ಕೆಂಪು ಸೂರ್ಯನುದಯಿಸುತಿರಲು 
ಹೊಸ ದಿನವೊಂದರ ಆರಂಭವೆಂದು ಖುಷಿಪಡುವ ಸುಖ 

- ಈಶ್ವರ ಪ್ರಸಾದ.   

6 ಕಾಮೆಂಟ್‌ಗಳು:

 1. ಕವನಾ ತುಂಬಾ ಚೆನ್ನಾಗಿದೆ ಈಶ್ವರ ಅವರೇ, ಅಭಯಂತರರ ಕಲ್ಪನಾ ಲೋಕಕ್ಕೆ ನನ್ನ ಮನ ಸೋತಿತು.

  ಪ್ರತ್ಯುತ್ತರಅಳಿಸಿ
 2. ಸಣ್ಣ ಪುಟ್ಟ ಸಂಗತಿಗಳೇ ಮನದಲ್ಲಿ ಅಚ್ಚಳಿಯದೆ ನಿಲ್ಲುವುದು..
  ಚಂದದ ಕವನ.. ಜೊತೆಗೆ ಫೋಟೋ ಬಹಳ ಚನ್ನಾಗಿದೆ

  ಪ್ರತ್ಯುತ್ತರಅಳಿಸಿ
 3. @ಗುಬ್ಬಿ:
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
  ಹೌದು... ಸಧ್ಯದ ಯಾಂತ್ರಿಕ ಯುಗದಲ್ಲಿ ಕಲ್ಪನೆಯೊಂದೆ ನಮಗುಳಿದಿರುವುದು

  ಪ್ರತ್ಯುತ್ತರಅಳಿಸಿ
 4. ಮೌನರಾಗ- ಅವರೇ:
  ನಿಮ್ಮ ವಿಶ್ಲೇಷಣೆಗಳು ಚೆನ್ನಾಗಿವೆ. ಕವನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
  ನಂದಿ ಬೆಟ್ಟದಲ್ಲಿ ದಟ್ಟನೆ ಮಂಜು ಮುಸಿಕಿದಾಗ ತೆಗೆದ ಫೋಟೋ ಇದು.

  ಪ್ರತ್ಯುತ್ತರಅಳಿಸಿ
 5. ನಿಮ್ಮ ಕವಿತೆ ಸುಂದರವಾಗಿದೆ ...
  ನಿಮ್ಮ ಬ್ಲಾಗ್ ನ ಮೊದಲ ಬೇಟಿ ಸುಂದರ ಹಿನ್ನಲೆಯಲ್ಲಿದೆ ...
  ಇಷ್ಟವಾಯಿತು .
  ಬೇಟಿನೀಡಿ http://mownadache.blogspot.com/

  ಪ್ರತ್ಯುತ್ತರಅಳಿಸಿ
 6. ನಿಮ್ಮ ಸ್ಪಂದನಕ್ಕೆ ಧನ್ಯವಾದಗಳು ವಂದನಾ ಅವರೇ.

  ಪ್ರತ್ಯುತ್ತರಅಳಿಸಿ