ಶನಿವಾರ, ಫೆಬ್ರವರಿ 25, 2012

ಮನಸ್ಥಿತಿ

"ಸೂಪರ್" , "ಬ್ಯೂಟಿಫುಲ್ " , "ವೆರಿ ನೈಸ್ " ...  
ಫೇಸ್ ಬುಕ್ ನಲ್ಲಿದ್ದ  ರೂಪಳ ಒಂದೊಂದೇ ಫೋಟೋಕ್ಕೆ ಕಾಮೆಂಟ್ ಹೊಡೆಯುದರಲ್ಲಿ ಮಗ್ನನಾಗಿದ್ದೆ .
"ಹಲೋ ಮಿಸ್ಟರ್.ಸುರೇಶ್", ಜೋರಾದ ಧ್ವನಿ ಕೇಳಿ ತಿರುಗಿ ನೋಡಿದೆ.
ಮುಖ ಗಂಟಿಕ್ಕಿಕೊಂಡಿತು. "ಎಷ್ಟು ಹೊತ್ತಿಂದ ನನ್ನ PCನ ನೋಡುತಿದ್ದ ನೋ ಭಡವಾ " ಅಂದುಕೊಂಡು ,
"ಹೇಳಿ ಸಾರ್ " ಎಂದೆ.
"ಸಂಜೆ ನಿನ್ನ ಅಪ್ರೈಸಲ್ ಇದೆ ರೆಡಿಯಾಗಿರು " ಬೆನ್ನು ತಟ್ಟಿ, "ಕಾದಿದೆ ನಿನಗೆ "ಎಂಬಂತೆ ಒಂದು ವ್ಯಂಗ್ಯ ನಗುವನ್ನೂ ಬೀರಿ ಹೊರಟು ಹೋದ ಮ್ಯಾನೇಜರ್ ಸುಮನ್ .
          
ತುಂಬಾ ಕಷ್ಟಪಟ್ಟು ಓದಿ ಸಾಫ್ಟ್ ವೇರ್ ಸೇರಿಕೊಂಡಿದ್ದೆ . ಓದಿನ ದಿನಗಳಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದೆ .
ಅದೇನೋ ಸಾಧಿಸಬೇಕು , ಎಲ್ಲರಿಗಿಂತ ಬಿನ್ನವಾಗಿ ಬೆಳೆಯಬೇಕು ಎಂಬೆಲ್ಲ ಕನಸನ್ನು ಕಟ್ಟಿದ್ದೆ .
ಕನಸು ಕಟ್ಟಲೇನು ,ಮೌಂಟ್ ಎವೆರೆಸ್ಟ್ ಹತ್ತಬೇಕೇ ? ಜೀವನವೆಂಬ ಬೆಟ್ಟ ಹತ್ತಿರ ಬಂದಾಗ 'ಮೌಂಟ್ ಎವೆರೆಸ್ಟ್ ' ಬಿಡಿ , ಊರ ಗುಡ್ಡವನ್ನು ಹತ್ತುವ ಸಾಮರ್ಥ್ಯವೂ  ಕಳೆದು ಹೋಗಿರುತ್ತದೆ .
"ಇಷ್ಟು ದಿನ ಓದಿಸಿದೆ , ಇನ್ನಾವುದಾದರೂ ಕೆಲಸಕ್ಕೆ ಸೇರು " ಎಂಬ ತಂದೆಯ ಮಾತಿಗೆ ಮನ್ನಣೆ ಕೊಡದಿದ್ದರೆ ತಪ್ಪೆನಿಸಿತು. ಊರಿಂದ ಸಿಟಿಗೆ ಬಂದೆ . ಸುಲಭವಾಗಿ ಸಿಗುವ ಸಾಫ್ಟ್ ವೇರ್  ಉದ್ಯೋಗ ಕೈಬೀಸಿ ಕರೆಯಿತು... ಸೇರಿಕೊಂಡೆ .
ಕೆಲವು ವರ್ಷಗಳು ಕಳೆಯಿತು . ಅದೇ ಕೆಲಸ .. ಅದೇ PC .. ಅದೇ ಕ್ಯೂಬಿಕಲ್ ...
ಕೀ ಬೋರ್ಡ್ , ಮೌಸ್,  ಮಾನಿಟರ್ ಗಳಿಗೇ ಬೋರಾಗುವಷ್ಟು ಕೆಲಸ ಮಾಡುತಿದ್ದೆ .
ಆದರೆ ಕಂಪ್ಯೂಟರ್  ನಂತೆ  ನಾನು ಇದ್ದಲ್ಲೇ ಇದ್ದೆ . ಸ್ವಂತ ಬುದ್ದಿಯಿಲ್ಲದವನಂತೆ ಕ್ಲೈಂಟ್ ಹೇಳಿದ್ದನ್ನೆಲ್ಲಾ ಮಾಡಿ ಮಾಡಿ ಕೊಡುತ್ತಿದ್ದೆ .
ಇದೇ   ಕಂಪ್ಯೂಟರ್ ನ ಮುಂದೆ ಕೂತು ಎಷ್ಟೋ ರಿಲೀಸ್ ಮಾಡಿದ್ದೆ .
ಆದರೆ ಹೊಟ್ಟೆಯೊಂದು ಬಿಟ್ಟು ಬೇರಿನ್ನೇನೂ  ಬೆಳೆಯುತ್ತಿಲ್ಲ ಎನಿಸತೊಡಗಿತು .
ಹಾಗೆ  ನನ್ನ ಆಕಾಂಕ್ಷೆಗಳನ್ನು ನಾನೇ ಸಾಯಿಸಿಕೊಂಡೆ.
ಸಣ್ಣ ಕ್ಯೂಬಿಕಲ್ ಒಂದಕ್ಕೆ ನನ್ನ ದಿನದ ಮುಕ್ಕಾಲು ಭಾಗವನ್ನೂ ಮೀಸಲಾಗಿರಿಸಿ, ಯಾವುದಕ್ಕೂ 'ಗೂಗಲ್' ಗೆ ಶರಣಾಗಿ, ತಲೆಎಂಬುದನ್ನು "ಪೆನ್ ಡ್ರೈವ್ "ನಂತೆ ಟೆಂಪರರಿ ಸ್ಟೋರೇಜ್ ಏರಿಯ ವನ್ನಾಗಿ ಮಾಡಿಕೊಂಡೆ .
ಅದೇಕೋ ಇತ್ತೀಚಿಗೆ ಮ್ಯಾನೇಜರ್ ಗಳಿಗೆ ನನ್ನ ಕೆಲಸ ಹಿಡಿಸುತ್ತಿಲ್ಲ. ಪ್ರೋಡಕ್ಟಿವಿಟಿ ಇಲ್ಲ ,ಇಂಟರ್ನೆಟ್ ನಲ್ಲಿ ಟೈಂಪಾಸ್ ಮಾಡುತಿದ್ದೇನೆಂಬ ಕಂಪ್ಲೈಂಟ್ ಬೇರೆ .

" ಥ್ಯಾಂಕ್ಯೂ ಡಿಯರ್ ", ರೂಪಳ ಕೃತಜ್ಞತಾ ಕಾಮೆಂಟ್, ಫೇಸ್ ಬುಕ್ ನಲ್ಲಿ ಕಾಣಿಸಿತು.
"ಓ ಹುಡುಗಿ ಆನ್ಲೈನ್ ಇದ್ದಾಳೆ "ಎಂದು ಮನಸ್ಸಿಗೇನೋ ಸಂತಸವಾಯಿತು.
" ಹಾಯ್ ರೂಪ , ಆನ್ಲೈನ್ ಇದ್ದಿಯಾ  ?"
"ಹೌದು ಕಣೊ ...ನನ್ನ ಗೂಬೆ ಮ್ಯಾನೇಜರ್ ಅದೇನೋ ಕೆಲಸ ಕೊಟ್ಟಿದ್ದಾನೆ. ಇಂಟರ್ನೆಟ್ ನಲ್ಲಿ ಕೋಡ್ ಹುಡುಕುತ್ತಾ ಇದ್ದೀನಿ "
"ಹೌದಾ ಏನು ಹೇಳು "
"ಅದೇನೋ ತುಂಬಾ ಕಷ್ಟವಾಗಿದೆ . ಏನೆಂದೇ    ಗೊತ್ತಾಗುತಿಲ್ಲ "
"ಹೌದಾ, ನನಗೆ ಮೇಲ್  ಮಾಡು, ಚಿಂತೆ ಬಿಡು "
"ಓಹ್ ತುಂಬಾ ಥ್ಯಾಂಕ್ಸ್ ಡಿಯರ್  "
"ಇಟ್ಸ್ ಓಕೆ ಡಿಯರ್"
"ಸರಿ ಪ್ರಾಬ್ಲಮ್ ಕಳಿಸಿರುತ್ತೇನೆ ...ಇವತ್ತು ಸಂಜೇನೇ ಕೋಡ್ ಬೇಕು "
"ಓಕೆ , ಖಂಡಿತ  "
"ಬೈ... ಬೈ..."
"ಬೈ... ಬೈ ..."
                    
ಈ  ರೂಪ ಚಾಟಿಂಗ್ ಸಿಕ್ಕಾಗ ಅದೇನೋ ಸಂತಸ.
ಸಮಯ ಸರಿದಿದ್ದೇ ಗೊತ್ತಾಗಲ್ಲ .
ಅವಳು ಚಾಟಿಂಗ್ ಸಿಗುತ್ತಾಳೆ ಎಂಬ ಒಂದೇ ಕಾರಣಕ್ಕೆ ನನಗೆ PC ಮೇಲೆ ಪ್ರೀತಿ.
ಅವಳ ಕೆಲಸ ಎಷ್ಟೇ ಕಷ್ಟವಾಗಿದ್ದರೂ ಎಲ್ಲಾ ಹುಡುಗರಂತೆ ಕಷ್ಟ ಪಟ್ಟಾದರೂ ಮಾಡಿ ಕೊಡುತ್ತೀನಿ.
ಕಳೆದು ಹೋದ ಬುದ್ದಿವಂತಿಕೆ ಆಗ ಇದ್ದಕಿದ್ದಂತೆ ಬಂದು ಬಿಡುತ್ತದೆ.

"ಅಪ್ರೈಸಲ್ ಮೀಟಿಂಗ್ " ರಿಮೈಂಡರ್  ಸ್ಕ್ರೀನ್ ಮೇಲೆ ಬಂತು.
"ಸರಿ ಇನ್ನೊಂದು ಗಂಟೆ ಕೋರೆಯಿಸಿಕೊಳ್ಳಬೇಕು", ಎಂದುಕೊಳ್ಳುತ್ತ ಮೀಟಿಂಗ್ ರೂಂನ ಕಡೆ ನಡೆದೆ .

"ಬನ್ನಿ ಮಿಸ್ಟರ್. ಸುರೇಶ್ ,ಹೇಗಿದ್ದೀರಾ ?" ಕ್ರತಕ ನಗೆ ಬೀರಿ ಸ್ವಾಗತಿಸುವಂತೆ ಮಾಡಿದ ಮ್ಯಾನೇಜರ್ ಸುಮನ್. 
"ಹುಂ ....ಪರವಾಗಿಲ್ಲ " ಎಂದೆ.
"ಮತ್ತೆ ಹೇಳಿ ,ಏನೆಲ್ಲಾ ಮಾಡಿದ್ದೀರಾ ಈ ವರ್ಷ",  ಏನನ್ನೂ ಮಾಡಿಲ್ಲ ನೀನು ಎಂಬಂತೆ ದೃಷ್ಟಿ ಬೀರಿ ಪ್ರಶ್ನಿಸಿದ .
"ಏನೋ ಆದಷ್ಟು ಮಾಡಿದ್ದೀನಿ .ಕಂಪನಿಗೆ ನನ್ನಿಂದ ತುಂಬಾ ಹೆಲ್ಪ್ ಆಗಿದೆ ಅಂದುಕೊಂಡಿದ್ದೀನಿ "
".... " ನನ್ನ ಮಾತನ್ನು ನಂಬಲಾರದವನಂತೆ ಧೃಷ್ಟಿ ಬೀರಿದ .
" ಹೇಗೆ ಹೆಲ್ಪ್ ಆಗಿದೆ ಅಂತಿರಾ ...", ಮತ್ತೆ ವ್ಯಂಗ್ಯವಾಗೇ ಪ್ರಶ್ನಿಸಿದ .
"ಟಾರ್ಗೆಟ್ ಮೀಟ್ ಮಾಡೋಕೆ ಟ್ರೈ ಮಾಡಿದ್ದೀನಿ  ...."ನನ್ನ ಮಾತನ್ನು ಕತ್ತರಿಸಿ ,
"ಟಾರ್ಗೆಟ್ ಮೀಟ್ ಮಾಡಿದ್ದೀರಾ...ಯಾವಾಗ ? ಎಲ್ಲಾ ಕೆಲಸನೂ ನಿಧಾನವಾಗೆ ಮಾಡುತ್ತೀರಲ್ಲಾ''
ಏನು ಕೆಲಸ, ಹೇಗೆ ಮಾಡೋದು, ಎಷ್ಟು ದಿನ ಬೇಕು, ಏನೂ ಗೊತ್ತಿರೋಲ್ಲ ಈತನಿಗೆ. ಸುಮ್ಮನೆ ಕ್ಲೈಂಟ್ ಹೇಳಿದ ದಿನಕ್ಕೆ ಒಪ್ಪಿಕೊಂಡು , ಅದನ್ನೇ ಟಾರ್ಗೆಟ್ ಅನ್ನುತ್ತಾನೆ .ಹೇಗೆ ಮುಗಿಸೋಕೆ ಆಗುತ್ತೆ ಅಂದುಕೊಂಡೆ .
"ನನ್ನ  ಕಾಂಪಿಟೆನ್ಸಿ ಗೆ ಅಷ್ಟು ದಿನ ಬೇಕಾಗುತ್ತೆ "ಅಂದೆ .
"ಎಷ್ಟು ವರ್ಷದಿಂದ ಇದ್ದಿರಾ ...ಇನ್ನೂ  ಕಾಂಪಿಟೆನ್ಸಿ ಡೆವಲಪ್ಪ್ ಮಾಡಿಲ್ಲವಾ "
ಈತ ಭಾರಿ ಮಾಡಿದ್ದಾನಾ,  ಎನಿಸಿತು.  "ಏನೋ ಪರವಾಗಿಲ್ಲ ಅನ್ನುವಷ್ಟು  ಕಾಂಪಿಟೆನ್ಸಿ ಇದೆ .ಆದರೆ ಕ್ಲೈಂಟ್ ಕೊಡೊ ಕೆಲಸಕ್ಕೆ ಅಷ್ಟು ದಿನ ಬೇಕಾಗುತ್ತದೆ "ಅಂದೆ.
"ಅದೇನು ಕ್ಲೈಂಟ್ ಸುಮ್ಮಗೆ ಡೇಟ್ ಹೇಳ್ತಾರಾ...  ಕಾಂಪ್ಲೆಕ್ಸ್ಸಿಟಿ ನೋಡ್ಕೊಂಡೇ ಹೇಳ್ತಾರೆ. ನಿಮಗೆ ಹುಡುಗೀರು ಫೇಸ್ ಬುಕ್ ನಲ್ಲಿ ಹಾಕುವ ನಾಯಿ, ಬೆಕ್ಕುಗಳಿಗೆ ಕಾಮೆಂಟ್ ಹಾಕೊದರಲ್ಲೇ ಸಮಯ ಕಳೆದು ಹೋಗುತ್ತದೆ. ಇನ್ನು ಕೆಲಸ ಯಾವಾಗ ಮಾಡ್ತಿರಾ? "
ಮುಖಕ್ಕೆ ಬಾರಿಸೋಣ ಅನ್ನುವಷ್ಟು ಕೋಪ ಬಂತು.
"ಹಾಗೇನೂ ಇಲ್ಲ. ರಾತ್ರಿ-ಹಗಲು ಕೆಲಸ ಮಾಡ್ತೀನಿ. ಸ್ವಲ್ಪ ಹೊತ್ತು  ರಿಲ್ಯಾಕ್ಸ್ ಗಾಗಿ ಫೇಸ್ ಬುಕ್ ನೋಡ್ತೀನಿ ಅಷ್ಟೇ"
"ರಾತ್ರಿ ಏನು ಕೆಲಸ ಮಾಡ್ತಿರಾ, ಯಾರಿಗೆ ಗೊತ್ತು...", ಅಂದ.
ಹೌದು  ಇವ್ನು ಅಲ್ಲಿ ಮನೇಲಿ ಇರ್ತಾನೆ , ಇವನಿಗೇನು ಗೊತ್ತು ನಾವು ರಾತ್ರಿ ಕೆಲಸ ಮಾಡ್ತೀವಾ ಇಲ್ಲವಾ ಅಂತ ಅಂದುಕೊಂಡೆ
"ಸರಿ, ಈ ವರ್ಷ ಏನು ನಾಲೇಜ್ ಶೇರ್ ಮಾಡಿದ್ದಿರಾ..."
"ಪ್ರತೀ ವರ್ಷ ಶೇರ್ ಮಾಡೋಕೆ ಏನಿರುತ್ತದೆ... " ಅಂದೆ.
"ಏನೋ ಗೊತ್ತಿದ್ದರೆ ಶೇರ್ ಮಾಡಬಹುದು", ಅಂದ ವ್ಯಂಗವಾಗಿ.
" ... "
"ನಿಮ್ಮ ಪೀರ್ ಫೀಡ್ ಬ್ಯಾಕ್  ಚೆನ್ನಾಗಿಲ್ಲ... ಸರಿಯಾಗಿ ಕೋ-ಆಪರೇಟ್ ಮಾಡೋಲ್ಲ. ಇಷ್ಟು ವರ್ಷ  ಎಕ್ಸ್ ಪೀರಿಯೆನ್ಸ್ ಆದ್ರೂ ಇನ್ನೂ ಚಿಕ್ಕ ಪುಟ್ಟ ತಪ್ಪು ಮಾಡ್ತಾನೆ ಇರ್ತಿರಾ... "
ದೊಡ್ಡ ದೊಡ್ಡ ತಪ್ಪು ಮಾಡ್ತಿಲ್ಲವಲ್ಲ... ನಿಮ್ಮ ತರ ಯಾವಯಾವುದೋ ಟಾರ್ಗೆಟ್ಗೆ ಒಪ್ಪಿಕೊಂಡು ಅನ್ನಿಸಿತು. ಮೌನವಾಗಿದ್ದೆ.
"ಇನ್ನೇನಾದರೂ ಹೇಳೋದಕ್ಕಿದೆಯಾ", ಅಂದ.
"ತುಂಬಾ ವರ್ಷದಿಂದ ಇಲ್ಲೇ ಇದ್ದೀನಿ. ಪ್ರಮೋಶನ್ ಯಾವಾಗ" , ಅಂದೆ ನಿರ್ವಿಕಾರವಾಗಿ.
"ಈ ವರ್ಷ ಯಾರಿಗೂ ಪ್ರಮೋಶನ್ ಕೊಡ್ತಾ ಇಲ್ಲ. ಚೆನ್ನಾಗಿ ಕೆಲಸ ಮಾಡಿ... ಬರುವ ವರ್ಷ ನೋಡೋಣ... " ಅಂದ.
ಮೌನವಾಗಿದ್ದೆ.
"ಈ ವರ್ಷದ ನಿಮ್ಮ  ಪರ್ಪಾರ್ಮೆನ್ಸು  ಎವರೇಜ್ ಅಷ್ಟೇ.. ", ದೊಡ್ಡದಾಗಿ ಸರ್ಟಿಫಿಕೇಟ್ ಕೊಟ್ಟ.
ಯಾಕೆ ಏನು ಎಂದು ಪ್ರಶ್ನಿಸುವುದು ವ್ಯರ್ಥ ಅನ್ನಿಸಿತು.
"ಓಕೆ" , ಅಂದುಬಿಟ್ಟು ಹೊರಗೆ ಬಂದೆ.
ಜೀವನವೆಂದರೆ ಇಷ್ಟೇ ಅನ್ನಿಸಿತು.
ಮಾಡಿದ ಕೆಲಸಾನೆ ಮಾಡೋದು, ಅದರಲ್ಲಿ ಇಂಪ್ರೂಮೆಂಟ್ಸ್ ಅಂದರೆ ಏನು ಅಂತ ಅರ್ಥವಾಗಲಿಲ್ಲ.
ಚಾಲೆಂಜು ಇಲ್ಲದ ಕ್ಷೇತ್ರದಲ್ಲಿ ಪರ್ಪಾರ್ಮೆನ್ಸು ಎಂದರೆ ಏನು? ಅದೂ ಅರ್ಥವಾಗಲಿಲ್ಲ.
ಅರ್ಥ ಮಾಡಿಕೊಳ್ಳೋಣ ಅಂತನೂ ಅನ್ನಿಸಲಿಲ್ಲ.

"ಕೆಲಸ ಇನ್ನೂ ಆಗಿಲ್ಲವೇನೂ.. ", ರೂಪಳ ಇಮೇಲ್ ಇತ್ತು.
"ಓ ಹೌದಲ್ಲ.. " ಅಂದುಕೊಂಡು ಬೇಗನೆ ಅವಳ ಕೆಲಸ ಮುಗಿಸುವತ್ತ ಗಮನ ಹರಿಸಿದೆ.
ಮನದ ಮೂಲೆಯಲ್ಲಿ ಎಲ್ಲೋ ಒಂದು ಕಡೆ, "ಚಾಲೆಂಜ್  ಇರೋದು ಬರೀ ಕೆಲಸದಲ್ಲಿ ಅಲ್ಲ. ಅದನ್ನು ಮಾಡೋ ಮನಸ್ಥಿತಿಯಲ್ಲಿ" ಅನ್ನಿಸಿತು !

8 ಕಾಮೆಂಟ್‌ಗಳು:

 1. ಕೆಲಸದಲ್ಲಿನ ಏಕತಾನತೆ ನಿಂತ ನೀರಂತೆ ಭಾಸವಾಗುವುದು ಪ್ರತಿಯೊಬ್ಬರಿಗೂ ಸಹಜವೇ..
  ಕೊನೆಯ ಸಾಲು ಬಹಳ ಪ್ರೀಯವಾಗುತ್ತದೆ ಮತ್ತು ಸಂದೇಶದಂತೆ ಮನಸ್ಸಿನೊಳಗೆ ಇಳಿಯುತ್ತದೆ..

  ಒಳ್ಳೆಯ ಬರಹ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಮೌನರಾಗ ಅವರೇ ...
   ಹೌದು... ನೀವು ಹೇಳುವುದು ಸತ್ಯ.
   ಎಲ್ಲಾ ಕೆಲಸವೂ ನಮ್ಮ ಮನಸ್ಥಿತಿಯಂತೇ ಕಾಣುವುದು ಅಲ್ಲವೇ...?
   ನೀವು ಕತೆಯನ್ನು ಮೆಚ್ಚಿ ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು.

   ಅಳಿಸಿ
 2. "ಚಾಲೆಂಜ್ ಇರೋದು ಬರೀ ಕೆಲಸದಲ್ಲಿ ಅಲ್ಲ. ಅದನ್ನು ಮಾಡೋ ಮನಸ್ಥಿತಿಯಲ್ಲಿ"... ನಿಜವಾದ ಮಾತು....ಚೆನ್ನಾಗಿದೆ ನಿಮ್ಮ ಬರಹ...ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಅಶೋಕ್ ಸರ್ ...
   ನಿಮ್ಮ ಪ್ರೋತ್ಸಾಹಕ ಪ್ರತಿಕ್ರಿಯೆಗೆ ಧನ್ಯವಾದಗಳು.

   ಅಳಿಸಿ
 3. ಇಷ್ಟವಾಯ್ತು ... ಹಾಗೆ ಒಂದು ನೆನಪಿಗೆ ಬಂತು ... ಕನ್ಫಾರ್ಮೆಶನ್ ಟೈಮ್ ಲಿ ನಾನು ಏನು ಕೆಲಸ ಮಾಡಿದ್ದೀನಿ ಅನ್ನೋದಕ್ಕೆ ಒಂದು ಫೋಲ್ಡರ್ ಫುಲ್ ಮೇಲ್ ಸೇವ್ ಮಾಡ್ಕೊಂಡಿದ್ದೆ ... ಏನಾದ್ರೂ ಮ್ಯಾನೇಜರ್ ಪರ್ಫಾರ್ಮನ್ಸ್ ಇಲ್ಲ ಅಂದಿದ್ದರೆ ಆ ಮೇಲ್ ಗಳನ್ನೆಲ್ಲ ಮುಕ್ಖದ ಮೇಲೆ ಬಿಸಾಕಿ ಇಷ್ಟು ಕೆಲಸ ಮಾಡಿದ್ದೇನೆ ನೋಡಿ ಅಂತ ಹೇಳೋನಿದ್ದೆ ಮ್ಯಾನೇಜರ್ ಪುಣ್ಯ ಚೆನ್ನಾಗಿತ್ತು ... ಅಪ್ಪ್ರಿಶಿಯೇತ್ ಮಾಡಿ ಕನ್ಫಾರ್ಮೆಶನ್ ಕೊಟ್ಟ ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು ಸಾರ್...
   ಹುಂ.. ಚೆನ್ನಾಗಿದೆ ನಿಮ್ಮ ಕತೆ.. ಅನುಭವವನ್ನು ಹಂಚಿಕೊಂಡಿದ್ದಕ್ಕೆ ಸಂತಸವಾಯಿತು.

   ಅಳಿಸಿ
 4. Maraya, Appraisal samayadalle yaake ee tarahada kathe barithiyooo? Gaayada mele uppu savaruva kelasa ;)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹ್ಹ ಹ್ಹ, ಹೌದ ಮಾರಾಯ !! ನಮ್ಮದು ಅಪ್ರೈಸಲ್ ಆಗಿ ತುಂಬಾ ದಿನ ಆಯಿತು.. ಹಾಗೆ ಬರೆದಿದ್ದು :)

   ಅಳಿಸಿ