ಶನಿವಾರ, ಫೆಬ್ರವರಿ 4, 2012

ನೆನಪು


ಸಂಜೆಗತ್ತಲಲ್ಲಿ ಸಮುದ್ರ ಕಿನಾರೆಯಲ್ಲಿ ನಡೆಯವ ಖುಷಿಯೇ ಬೇರೆ. ಸುಂದರ ಸೂರ್ಯ ಕಿರಣಗಳು, ಬೀಸಿ ಬರುವ ಮಂದ ಮಾರುತ, ಸಣ್ಣದಾಗಿ ದಡಕ್ಕೆ ಬಡಿಯುವ ನೀರ ಅಲೆಗಳು, ಅವಸರದಿಂದ ಗೂಡು ಸೇರಲು ಹಾರುತ್ತಿರುವ ಹಕ್ಕಿಗಳು, ದಿನದ ಕೆಲಸ  ಮುಗಿಸಿ ಮನೆಗೆ ಮರಳುವ ಮೀನುಗಾರರು ... ಎಲ್ಲವು ದಿನವೂ ಕಾಣುವ ದೃಶ್ಯಗಳೇ. ಆದರೆ ಪ್ರತಿದಿನವೂ ಅದರಲ್ಲೇನೋ ಹೊಸತನ. ದಿನವೂ ನವೀನವೆಂಬ ಭಾವನೆ. ಅದಕ್ಕೆ ಸಮುದ್ರ ತಟವೆಂದರೆ ನನಗೆ ಅದೇನೋ ಆಕರ್ಷಣೆ , ಮುಗಿಯದ ತುಡಿತ. 

ಕೆಂಪು ಕಿರಣಗಳಿಗೆ ಮೈಯೊಡ್ಡಿ ಕೂತ ಯುವ ಜೋಡಿಯನ್ನು ನೋಡುವುದೇ ಒಂದು ಸೊಗಸು. ಪ್ರಪಂಚವಿಡಿ ತಮ್ಮನ್ನು ನೋಡುತ್ತಿದ್ದರೂ, ತಮ್ಮನ್ನು ಯಾರೂ ಗಮನಿಸುತ್ತಿಲ್ಲವೆಂಬ ಭ್ರಮಲೋಕವನ್ನು ಕಟ್ಟಿ, ಅದರಲ್ಲೇ ಮುಳುಗಿ, ತಮ್ಮದೇ ಸಣ್ಣ ಪ್ರಪಂಚವನ್ನು ಕಟ್ಟಿಕೊಂಡು ಗಗನದಲ್ಲಿ ಹಾರುತ್ತಿರುವ ಮನಸ್ಸು. ತಮ್ಮ ಪ್ರಿಯರ ಕಣ್ಣಲ್ಲಿ ಕನಸುಗಳನ್ನು ಬಿತ್ತಿ, ಅದನ್ನೇ ಬೆಳೆಸಿ, ಅದರಲ್ಲೇ ಸೌಧಗಳನ್ನು ಕಟ್ಟಿ, ತಾವೇ ರಾಜ-ರಾಣಿ ಯರೆಂದು ಮೇರುವ ವಯಸ್ಸು. ಪಿಸು ಮಾತುಗಳನ್ನು ಆಡುತ್ತಾ, ಒಬ್ಬರ ಮುಖವನ್ನು ಇನ್ನೊಬ್ಬರು ದಿಟ್ಟಿಸುವದರಲ್ಲಿ ಅದೇನೋ ಒಂದು ಸಂತಸ. ಅತ್ತಿತ್ತ ನೋಡಿ ಪ್ರಿಯೆಯ ಗಲ್ಲಕ್ಕೊಂದು ಸಣ್ಣ ಮುತ್ತು ಕೊಟ್ಟು, ಜಗತ್ತನ್ನೇ ಗೆದ್ದೆನೆಂದು ಸಂಭ್ರಮಿಸುವ ಯುವಕ. ಜೀವನದುದ್ದಕ್ಕೂ ಮರೆಯಲಾರದ ಸವಿ ಗಳಿಗೆಯಿದು ಎಂದು ನಾಚುತ್ತ ಕೆನ್ನೆ ಕೆಂಪದರೂ ಅದನ್ನು ಪ್ರೀತಿಯಿಂದಲೇ ವಿರೋದಿಸುವ ಯುವತಿ ... ನೋಡಿದವರಿಗೆ ಮನದಾಳದಲ್ಲಿ ಪುಳಕವಾಗದಿರದು.

ಈ ಯುವ ಜೋಡಿಯನ್ನು ನೋಡುತ್ತಾ, ಮನ ವರುಷಗಳಷ್ಟು ಹಿಂದೋಡಿತು. ಜೀವನವೆಂದರೆ ಇಷ್ಟೇ ತಾನೇ ? ಹೊಸದನ್ನೇನೋ ಸಾಧಿಸಬೇಕೆಂಬ ಹಂಬಲ, ಹಳೆಯದನ್ನು ಮತ್ತಷ್ಟು ಕೊರೆಯುವ ಚಪಲ. ಅದು ಬಿಟ್ಟರೆ ಇಂದಿನದ್ದಲ್ಲಿ ನೆನೆಯುವದಕ್ಕೆ ಏನಿರುತ್ತದೆ ವಿಶೇಷ. ಜೀವನದಲ್ಲಿ ಯಾವತ್ತೂ ಮತ್ತೆ ಮತ್ತೆ ನೆನಪಾಗುವ ದಿನಗಳೆಂದರೆ ಬಾಲ್ಯ ಮತ್ತು ಕಾಲೇಜ್ ದಿನಗಳು. ಬಹುಶ: ಯಾವುದೇ ಜವಾಭ್ದಾರಿ ಇಲ್ಲದೆ ಬರಿ ಕನಸು ಮತ್ತು ವರ್ತಮಾನಕ್ಕೆ ಮೀಸಲಾಗಿಡುವ ದಿನಗಳು ಅದು ಮಾತ್ರ. ಕಾಲೇಜ್ ದಿನಗಳಲ್ಲಿ ಪ್ರೀತಿ-ಪ್ರೇಮ ಎಂದು ಸಮಯ ಹಾಳು ಮಾಡದ "ಆದರ್ಶ" ವಿದ್ಯಾರ್ಥಿ ನಾನು. ಬರಿ ಓದು, ಮಾರ್ಕ್ಸ್, ಗುರಿಗಳಿಗೆ ಹೆಚ್ಚು ಒತ್ತು ಕೊಟ್ಟು ನಡೆವ ಬೆರಳೆಣಿಕೆಯ ವಿದ್ಯಾರ್ಥಿಗಳ ಗುಂಪಿಗೆ ಸೇರಿದವ ನಾನು. ಹಾಗಾಗಿ ನನ್ನ ಕನಸುಗಳಲ್ಲಿ, ಭೂತ ಕಾಲಗಳಲ್ಲಿ ಕಾಲೇಜ್ ದಿನಗಳಿಗೆ ಪ್ರಾಶಸ್ತ್ಯ ತುಂಬಾ ಕಮ್ಮಿ. ಅದರ ಬದಲು ನನಗೆ ಮತ್ತೆ ಮತ್ತೆ ನೆನಪಾಗುವುದೆಂದರೆ ನನ್ನ ಪ್ರೀತಿ ಹುಟ್ಟಿದ ದಿನ. ನನ್ನ ಪ್ರೇಮ ಮೊಳಕೆಯೊಡೆದ ದಿನಗಳು.

ಆ ಬ್ರಹ್ಮ ತನ್ನ ಕೆಲಸಕ್ಕಾಗಿ ಗಂಡು-ಹೆಣ್ಣುಗಳನ್ನು ಅದೆಷ್ಟು  ಯೋಜನಬದ್ದವಾಗಿ  ಕೂಡಿಸುತ್ತಾನೆಂದರೆ, ಈವತ್ತು ತಾವೇ ದೊಡ್ಡ ಯೋಜನೆಗಳನ್ನು ಮಾಡುವುದಾಗಿ ಕೊಬ್ಬುವ ಪದವೀದರರೆಲ್ಲ ನಾಚಿ ತಲೆ ತಗ್ಗಿಸಬೇಕು. ದಿನವೂ ನೂರಾರು ಗಂಡು-ಹೆಣ್ಣುಗಳು   ಒಬ್ಬರನ್ನೊಬ್ಬರು ನೋಡುತ್ತಾರೆ, ಮಾತಾಡುತ್ತಾರೆ, ಜೊತೆಗೆ ಕೆಲಸವನ್ನೂ ಮಾಡುತ್ತಾರೆ. ಆದರೆ ಪ್ರೀತಿಯೆಂಬುದು ಹಾಗೆ ಹುಟ್ಟುವುದಿಲ್ಲ. ಅದು ಎಷ್ಟು ಆಪ್ಯಾಯಮಾನವೋ ಅಷ್ಟೇ ಆಕಸ್ಮಿಕವೂ ಹೌದು.

ಸಣ್ಣ ಹುಡುಗನೊಬ್ಬ ಸಮುದ್ರ ತೀರದಲ್ಲಿ ಮರಳ ಮೇಲೆ ಅದೇನೋ ಬರೆಯುತ್ತಿದ್ದ. ಸ್ವಲ್ಪ ಹೊತ್ತಲ್ಲೇ ತೆರೆಯೊಂದು ಅಪ್ಪಳಿಸಿ ಅವನು ಬರೆದದ್ದನ್ನೆಲ್ಲಾ ಅಳಿಸಿ ಹಾಕುತ್ತಿತ್ತು. ಆ ಹುಡುಗ ಮತ್ತೆ ಬರೆಯುತ್ತಿದ್ದ. ತೆರೆ ಮತ್ತೆ ಅಪ್ಪಳಿಸಿ ಅಳಿಸುತ್ತಿತ್ತು. ಇದು ಕೊನೆಯಿಲ್ಲದ ಆಟ. ಆದರೆ ಆ ಹುಡುಗನಿಗೆ ಬೇಜಾರಿಲ್ಲ. ಮತ್ತೆ ಮತ್ತೆ ಮರಳಿ ಯತ್ನವ ಮಾಡುತ್ತಿದ್ದ. ಹೌದು ಈ ಜೀವನದ ಆಟದಲ್ಲೂ ಹೀಗೆಯೇ. ನಮಗೆ ಇಷ್ಟವಾದ ಕೆಲಸವನ್ನು, ನಮಗೆ ಮಜಾ ಕೊಡುವ ಕಾರ್ಯಗಳನ್ನು ನಾವು ಮತ್ತೆ ಮತ್ತೆ ಪ್ರಯತ್ನಿಸಿ ಮಾಡುತ್ತೇವೆ. ಸೋಲು ಬರುವುದೆಂದು ಉಳಿದವರೆಲ್ಲರಿಗೂ ಗೊತ್ತಿದ್ದರೂ ನಮಗದು ಗೊತ್ತಿರುವುದಿಲ್ಲ. ಅಥವಾ ಗೊತ್ತಿದ್ದರೂ ಅದರಿಂದ ಹಿಂದೆ ಸರಿಯಲು ಮನಸ್ಸು ಕೇಳುವುದಿಲ್ಲ... ಆವತ್ತು ಆ ಹುಡುಗಿಯನ್ನು ಕಂಡಾಗಲೂ  ನನಗನ್ನಿಸಿದ್ದು ಹಾಗೆಯೇ. ಆಕೆ ಯಾರೆಂದು ಗೊತ್ತಿರಲಿಲ್ಲ.... ಆಕೆಯ ಹೆಸರು, ಪರಿಚಯ ಏನೂ ಗೊತ್ತಿರಲಿಲ್ಲ. ಆದರೂ ಪ್ರೀತಿಯೆಂಬ ಮಾಯೆ ಅದೇಗೋ ಆಕೆಯ ರೂಪದಲ್ಲಿ ನನ್ನನಾವರಿಸಿಕೊಂಡಿತ್ತು... ಆಕೆ ನನ್ನವಳಾಗಬೇಕು ಎನಿಸಿಬಿಟ್ಟಿತ್ತು...

ಯಾವುದೊ ಊರಲ್ಲಿ ಯಾವುದೊ ಸಮಾರಂಭದಲ್ಲಿ ಆಕೆಯನ್ನು ಕಂಡಿದ್ದು ಅಷ್ಟೇ... ಅದೇಕೋ ಆಕೆ ನನಗಿಷ್ಟವಾಗಿ ಬಿಟ್ಟಳು. ಇದಕ್ಕೇ ಇರಬೇಕು "ಸೆಳೆತ" ಎನ್ನುವುದು.... ಸಮುದ್ರ ನನಗಿಷ್ಟ. ಯಾಕಿಷ್ಟ ಎಂದರೆ ನನ್ನಲ್ಲಿ ಉತ್ತರವಿಲ್ಲ. ಇಷ್ಟ ಎಂದರೆ ಇಷ್ಟ ಅಷ್ಟೇ. ಅದನ್ನು ನಾವಾಗಿ ಹುಟ್ಟಿಸುವದಲ್ಲ, ಅದು ತಾನಾಗಿ ಹುಟ್ಟುವುದು. ಹುಟ್ಟಿದ ಮೇಲೆ ಅದನ್ನು ಬೆಳೆಸುವುದು ನಾವು. ಹಠಗಟ್ಟಿ ಮರಳಿ ಯತ್ನ ಮಾಡುವುದೂ ನಾವು. ಅಷ್ಟೂ ಮಾಡದಿದ್ದರೆ ಅದು ಇಷ್ಟ ಹೇಗಾಗುತ್ತದೆ?

ಜೀವನವೆಂಬುದು ಮಾಯೆ. ಜಗತ್ತೆಂಬುದು ಸಣ್ಣದು. ಅಲ್ಲಿ ಎಲ್ಲರೂ ಮತ್ತೆ ಮತ್ತೆ ಸಿಕ್ಕುತ್ತಾರೆ ಇದೆಲ್ಲಾ ವೇದಾಂತದ ಮಾತಷ್ಟೇ ಎಂದುಕೊಂಡಿದ್ದೆ. ಆದರೆ ಇದು ವಾಸ್ತವ, ಬರಿ ಕತೆಯಲ್ಲ ಎಂದು ಗೊತ್ತಾದ್ದು ಆಕೆ ನನಗೆ ಮತ್ತೆ - ಮತ್ತೆ ಸಿಕ್ಕಾಗ. ಒಂದು ಸಾರಿ ಸಿಕ್ಕವಳು ಮತ್ತೊಂದು ಸಾರಿ ಸಿಕ್ಕರೆ ಆಕಸ್ಮಿಕ ಎನ್ನಬಹುದು. ಆದರೆ ಮನಸನ್ನಾವರಿಸಿದವಳು ಮೂರನೆಯ ಬಾರಿಯು ಸಿಕ್ಕಿಬಿಟ್ಟರೆ... ಹೌದು ಆಗ ನಿಮ್ಮಂತೆ ನನಗೂ ನಂಬುವುದೋ ಬಿಡುವುದೋ ಗೊತ್ತಾಗಲಿಲ್ಲ.

ನೀರವ ರಾತ್ರಿಯಲ್ಲಿ ಬಸ್ಸು ಜೋರಾಗಿ ಹೋಗುತ್ತಿದ್ದರೆ ಮನಸ್ಸು ಅದಕ್ಕಿಂತ ವೇಗವಾಗಿ ಓಡುತ್ತಿತ್ತು... ಮನಸೆಂಬುದು ತುಂಬ ಜಟಿಲವಾದ ತಾಣ. ಅದರಲ್ಲೇನಾದರೂ ಸಿಕ್ಕು ಹಾಕಿಕೊಂಡರೆ ಕಳಚಿಕೊಳ್ಳುವುದು ತುಂಬ ಕಷ್ಟ. ಬಲೆಯಲ್ಲಿ ಬಿದ್ದಂತೆ... ಒದ್ದಾಡಿ ದಷ್ಟೂ ಅದು ಮತ್ತಷ್ಟು ಅಂಟಿಕೊಳ್ಳುತ್ತದೆ. ಒಮ್ಮೆ ಬೇಕು ಅಂದುಕೊಂಡಿದ್ದನ್ನು, ಅದು ಹೇಗಿದ್ದರೂ ಸರಿ, ಹೇಗಾದರೂ ಸರಿ, ಪಡೆಯಲೇಬೇಕೆಂಬುದು ಮನಸ್ಸಿನ ಹಠ. ಅದು ಭಗವಂತ ಕೊಟ್ಟ ವರ ಹಾಗು ಶಾಪ. ಆಕೆ ಬೇಕು ಎಂದು ಮನಸಲ್ಲಿ ಬರೆದಾಗಿತ್ತು. ಆದರೆ ಆಕೆ ಯಾರು ? ಎಲ್ಲಿರುತ್ತಾಳೆ ? ಮನೆಯವರು ಯಾರು ? ಏನು ಗೊತ್ತಿರಲಿಲ್ಲ.... ಬರಿ ಕಣ್ಣೋಟದಲ್ಲಿ ಹುಟ್ಟುವ ಪ್ರೀತಿಗೆ ಎಷ್ಟು ಶಕ್ತಿಯಿರುತ್ತದೆ ಎಂದರೆ ಅದು ಬೇಕೆನಿಸಿದ್ದನ್ನು ಪಡೆಯುವ ದಾರಿಯನ್ನೂ ಬರೆದಿರುತ್ತದೆ.

ಆಕೆಯಿದ್ದ ಊರಿಂದ ತುಂಬಾ ದೂರ ಬಂದಾಗಿತ್ತು. ಆದರೆ ಬಂದಿದ್ದು ದೇಹ ಮಾತ್ರ, ಮನಸಲ್ಲ ಎಂಬುದು ನನ್ನನ್ನು ನೋಡಿದ ಯಾರು ಬೇಕಾದರೂ ಹೇಳುವಂತಿತ್ತು. " ಇರುವುದೆಲ್ಲವ ಬಿಟ್ಟು ಇರದುದರ ಎಡೆಗೆ ತುಡಿವುದೇ ಜೀವನ " . ಆದರೆ ಅದು ತಪ್ಪಲ್ಲ. ಇರುವುದರಲ್ಲೇ ತೃಪ್ತಿದ್ದರೆ ಮನುಷ್ಯ ಯಾಕೆ ಚಂದ್ರಲೋಕ ತನಕ ಹಾರುತ್ತಿದ್ದ  ? ಕನಸುಗಳು, ಕನಸಾಗಿಟ್ಟುಕೊಂಡರೆ ಅದು ಕನಸಾಗಷ್ಟೇ ಉಳಿಯುತ್ತದೆ. ಕನಸಿಗೊಂದು ಸ್ವರೂಪ ಕೊಟ್ಟಾಗ, ಮನಸಲ್ಲಿದ್ದ ಸ್ವರ ಹೊರ ಬಂದಾಗ, ಸಮಯಾಂತರದಲ್ಲಿ ನನಸು ಸಿದ್ದವಗಿರುತ್ತದೆ ಎಂಬುದು ಸುಳ್ಳಲ್ಲ.

ನನ್ನ ಆಕೆಯ ಮೇಲಿನ ಇಷ್ಟ ಎಲ್ಲವನ್ನೂ ಮಾಡಿಸಿತು. ಗೊತ್ತಿಲ್ಲದವಳು ಗೊತ್ತಾಗಿಬಿಟ್ಟಳು. ಹೆಸರಿಲ್ಲದವಳಿಗೆ ಹೆಸರು ಬಂತು. ವಿಳಾಸವಿಲ್ಲದವಳಿಗೆ ವಿಳಾಸ ಬಂತು... ಹೌದು, ನನ್ನ ಕಥೆ ಆಕೆಗೆ ತಲುಪಿ ಬಿಟ್ಟಿತು. ಪ್ರೇಮ ವಿವಾಹ ಕಷ್ಟ ಎಂಬುದು ಎಲ್ಲರಿಗೂ ಸತ್ಯವೇನೂ? ಆದರೆ ನನ್ನ ಪಾಲಿಗೆ ಆ ಮಾತು ಸುಳ್ಳಾಯಿತು. ಆಕೆ ನನ್ನ ಕೈ ಹಿಡಿದು ಮುದ್ದಿನ ಮಡದಿಯಾದಳು. ನನ್ನ ಸರ್ವಸ್ವವನ್ನೂ ಆವರಿಸಿಕೊಂಡು ಬಿಟ್ಟಳು.

ಸೂರ್ಯ ಮುಳುಗಿ, ಕೆಂಪಾಗಿದ್ದ ಆಗಸ ಕಪ್ಪಾಗಿತ್ತು. ಆದರೆ ಮೂಡುತ್ತಿದ್ದ ಚಂದ್ರ ಅದನ್ನು ಮತ್ತೆ ಬೆಳ್ಳಗಾಗಿಸಲು ಪ್ರಯತ್ನಿಸುತ್ತಿದ್ದ. ಜೀವನದ ಹಾಗೆ ಅನ್ನಿಸಿತು. ಪ್ರೀತಿ ಮದ್ಯೆ ಚಿಕ್ಕದಾದ ವಿರಸ ಮೂಡಿದಾಗ ಬಾಳು ಕಪ್ಪಾಗುವುದಿಲ್ಲ. ಮರು ದಿನದವರೆಗೆ ಕಾಯುವುದೂ ಇಲ್ಲ. ಮತ್ತೆ ರಾಜಿಯಾಗುವ ನೆಪಕ್ಕೆ ಕಾಯುತ್ತಿರುತ್ತದೆ ಅಷ್ಟೇ... ಸರಿ, ಮನೆಗೆ ಹೊತ್ತಾಗುತ್ತದೆ ಎಂದು ಮನೆಯ ಕಡೆಗೆ ಜೋರಾಗಿ ಹೆಜ್ಜೆ ಹಾಕತೊಡಗಿದೆ.

- ಈಶ್ವರ ಪ್ರಸಾದ. 

4 ಕಾಮೆಂಟ್‌ಗಳು:

  1. Excellent Ishwar, Happy to see you back as a very good writer, which many were expecting from you...
    Please continue this..

    ಪ್ರತ್ಯುತ್ತರಅಳಿಸಿ
  2. ಥ್ಯಾಂಕ್ಸ್ ಮಯೂರ ಅಣ್ಣ...
    ಕತೆ ಇಷ್ಟ ಆಯಿತು ಎಂದು ಕೇಳಿ ಖುಷಿ ಆಯಿತು.

    ಪ್ರತ್ಯುತ್ತರಅಳಿಸಿ